ಪೋರ್ಟ್‍ಲೂಯಿಸ್
ಪಶ್ಚಿಮ ಹಿಂದೂ ಸಾಗರದಲ್ಲಿ ಮಲಗಾಸಿ ಗಣರಾಜ್ಯಕ್ಕೆ ಪೂರ್ವದಲ್ಲಿ ಸುಮಾರು 720 ಕಿ.ಮೀ. ದೂರದಲ್ಲಿರುವ ಮಾರಿಷಸ್ ದೇಶದ ರೇವು ಪಟ್ಟಣ, ರಾಜಧಾನಿ. ದ.ಅ. 20010' ಮತ್ತು ಪೂ.ರೇ. 57030' ಮೇಲೆ ಇದೆ. ಜನಸಂಖ್ಯೆ 150000 (2005). ಸಂಚಾರ ಮಾರ್ಗಗಳ ಮಧ್ಯಬಿಂದುವಿನಂತಿರುವ ಇದರ ಸ್ಥಾಣ ಮಹತ್ವಪೂರ್ಣವಾದ್ದು. ಇದೊಂದು ಆಳ ಕಡಲಿನ ರೇವು. ಪಟ್ಟಣಕ್ಕೆ ಹೊಂದಿದಂತೆ ಅರ್ಧ ವರ್ತುಲಾಕಾರದಲ್ಲಿ ಹಬ್ಬಿರುವ ಪರ್ವತ ಶ್ರೇಣಿಯಿಂದಾಗಿ ಇದು ಸುರಕ್ಷಿತವಾಗಿದೆ. ರೇವಿನ ಮುಖದ ಬಳಿ ಇರುವ ಹವಳದ ದಿಬ್ಬಗಳ ಕಂಡಿ ಹಡಗುಗಳ ಪ್ರವೇಶಕ್ಕೆ ಅನುವು ಮಾಡಿಕೊಡುತ್ತದೆ. ಪಟ್ಟಣದ ವಾಯುವ್ಯದಲ್ಲಿ ಹರಿಯುವ ಗ್ರ್ಯಾಂಡ ನದಿ ಈ ನಗರಕ್ಕೆ ಕುಡಿಯುವ ನೀರನ್ನು ಪೂರೈಸುತ್ತದೆ.

ಪೋರ್ಟ್ ಲೂಯಿಸನ್ನು 1936 ರಲ್ಲಿ ಫ್ರೆಂಚರು ಸ್ಥಾಪಿಸಿದರು. ಕೇಪ್ ಆಫ್ ಗುಡ್ ಹೋಪನ್ನು ಸುತ್ತುವರಿದು ಏಷ್ಯ ಮತ್ತು ಯೂರೋಪ್‍ಗಳ ನಡುವೆ ಸಂಚರಿಸುವ ನೌಕೆಗಳಿಗೆ ಅಂದಿನಿಂದ ಇದು ತಂಗುದಾಣವಾಗಿದೆ. ನೆಪೋಲಿಯನ್ ಯುದ್ಧಗಳ ಸಮಯದಲ್ಲಿ (1800-15) ಇದನ್ನು ಬ್ರಿಟಿಷರು ಆಕ್ರಮಿಸಿ ಆಯಕಟ್ಟಿನ ಸ್ಥಳವನ್ನಾಗಿರಿಸಿಕೊಂಡು, ಹಿಂದೂ ಮಹಾ ಸಾಗರದ ಮೇಲೆ ಹತೋಟಿ ಸ್ಥಾಪಿಸಿಕೊಂಡಿದ್ದರು. ಆದರೆ, 1869 ರಲ್ಲಿ ಸೂಯೆಜ್ ಕಾಲುವೆಯ ನಿರ್ಮಾಣದಿಂದ ಇದರ ಪ್ರಾಮುಖ್ಯ ಕಡಿಮೆಯಾಯಿತು. ಪಶ್ಚಿಮದಿಂದ ಬರುವ ಹಡಗುಗಳು ಗುಡ್‍ಹೋಪ್ ಭೂಶಿರವನ್ನು ಬಳಸುವ ಬದಲು ನೇರವಾಗಿಯೇ ಬರತೊಡಗಿದವು.

ಸಂಗೀತ ಮತ್ತು ಕಲಾಮಂದಿರಗಳು, ಸಾರ್ವಜನಿಕ ಗ್ರಂಥಾಲಯ, ರೋಮನ್ ಕ್ಯಾತೊಲಿಕ್ ಕ್ರೈಸ್ತ ಆರಾಧನ ಮಂದಿರಗಳು, ಕಾಲೇಜು ಕಟ್ಟಡಗಳು, ಸಾರ್ವಜನಿಕ ಮತ್ತು ಸಸ್ಯಶಾಸ್ತ್ರ ಉದ್ಯಾನಗಳು, ನೇರ ಹಾಗೂ ವಿಶಾಲವಾಗಿರುವ ರಸ್ತೆಗಳು, ಸುಂದರ ಚೌಕಗಳು, ಚಿತ್ರಮಂದಿರಗಳು ಇವು ನಗರದ ವೈವಿಧ್ಯಮಯ ಜೀವನದ ದ್ಯೋತಕವಾಗಿವೆ; ಇಲ್ಲಿಯ ಸಾಮಾಜಿಕ ಹಾಗೂ ಸಾಂಸ್ಕøತಿಕ ಮಟ್ಟವನ್ನು ಹೆಚ್ಚಿಸಿವೆ. ನಗರದ ಸುಮಾರು ಮಧ್ಯದಲ್ಲಿ ಗುಡ್ಡವೊಂದರ ಮೇಲೆ 1838 ರಲ್ಲಿ ಕಟ್ಟಿದ ದುರ್ಗವೊಂದಿದೆ.

ಇದು ಸಿಗರೇಟು, ಬೆಂಕಿಕಡ್ಡಿ, ಕೊಬ್ಬರಿ, ಕೊಬ್ಬರಿಎಣ್ಣೆ, ಸಾಬೂನು, ಸಕ್ಕರೆ, ಹಡಗು ನಿರ್ಮಾಣ ಮತ್ತು ದುರಸ್ತಿ, ಮೋಟಾರು ಜೋಡಣೆ, ರೈಲ್ವೆ ಕಾರ್ಯಾಗಾರ ಮುಂತಾದ ಅನೇಕ ಕೈಗಾರಿಕೆಗಳ ಕೇಂದ್ರವಾಗಿದೆ. ಇದೊಂದು ವಾಣಿಜ್ಯ ಕೇಂದ್ರ ಕೂಡ. ಇಲ್ಲಿಂದ ರಫ್ತಾಗುವ ಸರಕುಗಳ ಪೈಕಿ ಸಕ್ಕರೆ ಪ್ರಮುಖವಾದ್ದು (ಸೇ. 90); ನಗರದಲ್ಲಿ 50 ಕ್ಕೂ ಹೆಚ್ಚು ನಿಯತಕಾಲಿಕೆಗಳೂ 13 ಕ್ಕೂ ಹೆಚ್ಚು ದಿನ ಪತ್ರಿಕೆಗಳೂ ಪ್ರಕಟವಾಗುತ್ತವೆ.				(ವಿ.ಎಸ್.ಬಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ